ಕೊಪ್ಪಳ: ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಪೂಜೆ ವಿವಾದಕ್ಕೆ ಸಂಬಂಧಿಸಿದಂತೆ, ಮಂತ್ರಾಲಯ ಮಠದ ಪರ ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ನೀಡಿದೆ. ಈ ತೀರ್ಪಿನಂತೆ, ಮಂತ್ರಾಲಯ ರಾಯರ ಮಠದ ಸುಬುಧೇಂದ್ರತೀರ್ಥ ಸ್ವಾಮೀಜಿ, ಮೂವರ ಯತಿಗಳ ಪೂಜೆಗೆ ಅನುಮತಿ ನೀಡಲಾಗಿದೆ.
ತೀರ್ಪಿನ ಹಿನ್ನೆಲೆ:
ಧಾರವಾಡ ಹೈಕೋರ್ಟ್ ಈ ತೀರ್ಪು ನೀಡಿದ್ದು, ನವವೃಂದಾವನ ಗಡ್ಡೆಯಲ್ಲಿ ಸುಬುಧೇಂದ್ರ ತೀರ್ಥರು ಪೂಜೆಯನ್ನು ನಿರ್ವಹಿಸಲು ಪ್ರವೇಶ ಮಾಡಿದ್ದು, ಮಂತ್ರಾಲಯದ ಭಕ್ತರಲ್ಲಿ ಸಂಭ್ರಮ ಮೂಡಿಸಿದೆ. ಭಕ್ತರು ಬಣ್ಣ ಎರಚಾಡಿ, ಪಟಾಕಿ ಸಿಡಿಸಿ, ನೃತ್ಯ ಮಾಡುತ್ತಾ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಉತ್ತಾರಾಧಿಮಠದ ಆಕ್ಷೇಪಣೆ:
ಆನೆಗುಂದಿಯ ನವವೃಂದಾವನದಲ್ಲಿ ಶ್ರೀ ರಾಘವೇಂದ್ರಸ್ವಾಮಿ ಮಠದವರಿಗೆ ಅಷ್ಟೋತ್ತರ ಪೂಜಾ ಕಾರ್ಯಕ್ಕೆ ನಿರ್ಬಂಧ ವಿಧಿಸುವಂತೆ ಉತ್ತಾರಾಧಿಮ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್ ಏಕಸದಸ್ಯ ಪೀಠ, ಈ ಅರ್ಜಿಯನ್ನು ಪರಿಗಣಿಸಿ ಅಷ್ಟೋತ್ತರ ಪೂಜಾ ಕಾರ್ಯಕ್ಕೆ ನಿರ್ಬಂಧ ಹೇರಿತ್ತು. ಈ ಆದೇಶವನ್ನು ಪ್ರಶ್ನಿಸಿ, ಶ್ರೀ ರಾಘವೇಂದ್ರಸ್ವಾಮಿ ಮಠ ಮೇಲ್ಮನವಿ ಸಲ್ಲಿಸಿತ್ತು.
ಸುಬುಧೇಂದ್ರತೀರ್ಥ ಸ್ವಾಮೀಜಿಯ ಪ್ರತಿಕ್ರಿಯೆ:
ಮಂತ್ರಾಲಯ ರಾಯರ ಮಠದ ಸುಬುಧೇಂದ್ರತೀರ್ಥ ಸ್ವಾಮೀಜಿ, “ಸತ್ಯಕ್ಕೆ ಜಯ ಸಿಕ್ಕಿದೆ. ಮೂವರ ಯತಿಗಳ ಪೂಜೆಗೆ ಹೈಕೋರ್ಟ್ ಅನುಮತಿ ನೀಡಿದೆ. ನಾವು ನಮ್ಮ ಪೂರ್ವರ ವೃಂದಾವನಗಳಲ್ಲಿ ಪೂಜೆ ಸಲ್ಲಿಸುತ್ತೇವೆ” ಎಂದು ಹೇಳಿದ್ರು.
Also Read: PM Vishwakarma Yojana: ಕೇಂದ್ರ ಸರ್ಕಾರದಿಂದ 15,000 ರೂಪಾಯಿಗಳ ಸಹಾಯಧನ, ಈಗಲೇ ಅರ್ಜಿ ಸಲ್ಲಿಸಿ!
ಪೂಜೆ ಮಾಡಲು ಅವಕಾಶ:
ನವವೃಂದಾವನ ಗಡ್ಡೆಯಲ್ಲಿ ಮಂತ್ರಾಲಯ ಮಠದವರನ್ನು ಪೂಜೆ ಮಾಡಲು ಅವಕಾಶ ನೀಡಲಿಲ್ಲ ಎಂಬ ದಾವೆ ತಿರಸ್ಕರಿಸಲಾಗಿದ್ದು, ಕೆಳಗಿನ ಕೋರ್ಟ್ ಸಹ ಈ ಸಂಬಂಧದಲ್ಲಿ ಮಂತ್ರಾಲಯದ ಪರ ತೀರ್ಪು ನೀಡಿತ್ತು. ಹೈಕೋರ್ಟ್ ಮೇಲ್ಮನವಿಯಲ್ಲಿಯೂ ಇದೇ ತೀರ್ಪು ಮುಂದುವರಿಯಿತು.
ಸೌಹಾರ್ದದ ಪ್ರಯತ್ನ:
ರಾಯರ ಮಠ ಯಾವಾಗಲೂ ಸೌಹಾರ್ದಕ್ಕೆ ಬದ್ಧವಾಗಿದೆ. “ಎಲ್ಲರೂ ಸೇರಿ ಸಂತೋಷದಿಂದ ಪೂಜೆ ಮಾಡೋಣ. ಸಂಧಾನದ ಹಸ್ತ ನಮ್ಮ ಕೈ ಯಾವಾಗಲೂ ಚಾಚಿರುತ್ತೇವೆ” ಎಂದು ಸುಬುಧೇಂದ್ರತೀರ್ಥ ಸ್ವಾಮೀಜಿ ಹೇಳಿದರು.
ವಿವಾದದ ಮುಕ್ತಾಯ:
ಹೈಕೋರ್ಟ್ ತೀರ್ಪಿನಿಂದ ಪದ್ಮನಾಭ, ಕವೀಂದ್ರ, ವಾಗೀಶ ತೀರ್ಥರ ಆರಾಧನೆಯ ಸುದೀರ್ಘ ವಿವಾದ ಇತ್ಯರ್ಥಗೊಂಡಿದೆ. “ಯಾವುದೇ ವಿಚಾರಗಳಲ್ಲಿ ರಾಯರ ಮಠ ವಿವಾದ ಮಾಡಿಲ್ಲ. ಮತ್ತೊಂದು ಮಠದವರು ನಮ್ಮ ಮಠದ ಮೇಲೆ ಕೇಸ್ ಹಾಕಿದ್ದರು” ಎಂದು ಸ್ವಾಮೀಜಿ ಹೇಳಿದರು.
ಜಯತೀರ್ಥರ ವೃಂದಾವನ ವಿವಾದ:
ಜಯತೀರ್ಥರ ವೃಂದಾವನ ವಿವಾದದ ಕುರಿತು, “ಈ ಬಗ್ಗೆ ಹೈಕೋರ್ಟ್ ನಮ್ಮ ಮೇಲೆ ನಿಷೇಧ ಹೇರಿದೆ. ಮೇಲ್ಮನವಿ ಸಲ್ಲಿಸಲಾಗಿದೆ, ಸದ್ಯದಲ್ಲಿಯೇ ವಿಚಾರಣೆಗೆ ಬರಲಿದೆ” ಎಂದು ಸ್ವಾಮೀಜಿ ಪ್ರತಿಕ್ರಿಯಿಸಿದರು.